
4 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ, ಅಳವಡಿಸಿಕೊಂಡ ತಾಲೂಕಿನ ಬೀರನಕೊಪ್ಪ ಗ್ರಾಮದ ರೈತ ಪ್ರಕಾಶ್ ನಾಗಪ್ಪ ಬೋಧಿಹಾಳ ಇಂದು 15 ಎಕರೆಗೆ ವಿಸ್ತರಿಸಿಕೊಂಡು ಎರೆಹುಳು ಹಾಗೂ ಸಾವಯವ ಗೊಬ್ಬರ ಬಳಸಿ ಉತ್ತಮ ಲಾಭ ಮಾಡಿಕೊಂಡಿದ್ದಾರೆ.
10 ಎಕರೆ ತೋಟದಲ್ಲಿ ಅಡಿಕೆ ಬಾಳೆ ಶುಂಠಿ ಮೆಣಸಿನ ಕಾಯಿ ಹೂವಿನ ಗಿಡಗಳನ್ನು ನೆಟ್ಟು ವರ್ಷಕ್ಕೆ 30 ಲಕ್ಷ ಆದಾಯ ಪಡೆದಿದ್ದಾರೆ, ಅಡಿಕೆ ತೋಟದಲ್ಲಿನ ಬಾಳೆಯಿಂದ ವರ್ಷಕ್ಕೆ 8 ಲಕ್ಷ ಆದಾಯ ಗಳಿಸಿ ಸೈ ಅನಿಸಿಕೊಂಡಿದ್ದಾರೆ.
ಈ ಮೊದಲು ಬೆಳೆಗಳಿಗೆ ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ ಕೈ ಸುಟ್ಟುಕೊಂಡಿದ್ದ ಅವರು ಎಚ್ಚೆತ್ತುಕೊಂಡು ಸಾವಯವ ಕೃಷಿಯತ್ತ ಹೆಜ್ಜೆ ಇಟ್ಟಿದ್ದಾರೆ, ತಾವೇ ತಯಾರಿಸಿದ ಎರೆಹುಳು ಹಾಗೂ ಕೊಟ್ಟಿಗೆ ಗೊಬ್ಬರದಿಂದ ಅಧಿಕ ಲಾಭ ಪಡೆಯುವ ಹೆಜ್ಜೆ ಇಟ್ಟಿದ್ದಾರೆ.
ಸರ್ಕಾರದ ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಸಾಕಷ್ಟು ನೀರು ಸಂಗ್ರಹಿಸಿ ಕೃಷಿಗೆ ಬಳಕೆ ಮಾಡಿಕೊಂಡಿದ್ದಾರೆ, ಒಂದೇ ಬೆಳೆಯಿಂದ ಅವರು ಅಂದಾಜು 20 ಲಕ್ಷಕ್ಕೂ ಹೆಚ್ಚು ನಷ್ಟವನ್ನು ಅನುಭವಿಸಿದ್ದರು. ಹೀಗಾಗಿ ಕೃಷಿಯಿಂದ ವಿಮುಖರಾಗಿ ಬೇರೆ ಉದ್ಯೋಗ ಕೈಗೊಳ್ಳಲು ಹಲವರು ಸಲಹೆ ನೀಡಿದ್ದರು. ಎದೆಗುಂದದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ರೈತರಿಗೆ ಮಾದರಿಯನಿಸಿಕೊಂಡಿದ್ದಾರೆ
ಅಡಿಕೆ ತೋಟದಲ್ಲಿ ಬಾಳೆ, ಶುಂಠಿ ಬೆಳೆಯಲು ಶುರು ಮಾಡಿದ ಅವರು ದಸರಾ ದೀಪಾವಳಿ ಹಬ್ಬಕ್ಕೆ ಚೆಂಡು ಹೂ ಬೆಳೆಯಲು ಆರಂಭಿಸಿದರು, ಅಲ್ಲಿಂದ ಹೆಚ್ಚು ಲಾಭದತ್ತ ಹೆಜ್ಜೆ ಹಾಕಲು ಆರಂಭವಾಯಿತು. ಎಂದು ಪ್ರಕಾಶ್ ತಮ್ಮ ಸಾಧನೆಯನ್ನು ವಿವರಿಸಿದರು ಹೊಲದ ಸುತ್ತಲೂ ತೆಂಗು ಕರಿಬೇವು ಹಾಗೂ ತೇಗ ಹಾಕಿದ್ದು ಫಲ ನೀಡುವ ಹಂತಕ್ಕೆ ತಲುಪಿವೆ.
ಸದ್ಯ ಶ್ರೀಗಂಧ ಬೆಳೆಯಲು ಆಸಕ್ತಿ ತೋರಿದ್ದು ಮುಂದಿನ ವರ್ಷದ ಸರ್ಕಾರದ ಸಹಾಯದಿಂದ ಎರಡು ಎಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ರೈತರು ಆರ್ಥಿಕವಾಗಿ ಸದೃಢರಾಗಬೇಕು…
ಕಳೆದ 12 ವರ್ಷಗಳ ಹಿಂದೆ ಕೊಳವೆ ಬಾವಿಯಿಂದ ಪೈಪುಗಳನ್ನು ಮೇಲಕ್ಕೆ ಎತ್ತುವಾಗ ಆಯತಪ್ಪಿ ಹೊಟ್ಟೆಯ ಮೇಲೆ ಬಿದ್ದ ಪರಿಣಾಮ ಆರು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಯಿತು, ಒಂದು ವರ್ಷ ಆಸ್ಪತ್ರೆಯಲ್ಲಿದ್ದು ಗುಣಮುಖರಾದ ಬಳಿಕ ಛಲ ಬಿಡದೆ ಹೊಸ ಹೆಜ್ಜೆ ಇಟ್ಟ ಪರಿಣಾಮ ಇಂದು ಕೃಷಿಯಿಂದ ಸಂತೃಪ್ತ ಜೀವನ ಸಾಗಿಸುತ್ತಿದ್ದೇನೆ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗದೆ ರೈತರು ಧೈರ್ಯದಿಂದ ಸಮಗ್ರ ಕೃಷಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದರು.